ಕಲಬುರಗಿ ಜು.22:- ಲೋಕಕ್ಕೆ ಕಲ್ಯಾಣವಾಗಲಿ, ಮಳೆ ಬೆಳೆ ಸಮೃದ್ದಿಯಾಗಲಿ ಎಂದು ಪ್ರಾರ್ಥಿಸಿ ಕಲಬುರಗಿ ತಾಲೂಕಿನ ಕಡಣಿ ಗ್ರಾಮದಲ್ಲಿ ಐದು ದಿನಗಳ ಕಠಿಣ ಅನುಷ್ಠಾನ ಶುರುವಾಗಿದೆ.
ಕಲಬುರಗಿ ಜಿಲ್ಲೆ ಕಲಬುರಗಿ ತಾಲೂಕಿನ ಕಡಣಿ ಗ್ರಾಮದ ಶ್ರೀ ಗಣಪತಿ ಮಹಾರಾಜರು ಕಳೆದ ಐದು ದಿನಗಳಿಂದ ಕಠಿಣ ಅನುಷ್ಠಾನ ಶುರು ಮಾಡಿದ್ದಾರೆ. ಕಡಣಿ ಗ್ರಾಮದಲ್ಲಿರುವ ಖಂಡೋಬಾ ಮಲ್ಲಯ್ಯ ದೇವಸ್ಥಾನದಲ್ಲಿ ಅನುಷ್ಠಾನ ಆರಂಭಿಸಲಾಗಿದೆ.
ಅನ್ನ ನೀರಿಲ್ಲ, ಗಾಳಿ ಬೆಳಕಿಲ್ಲ
ಗಣಪತಿ ಮಹಾರಾಜರು ಆರಂಭಿಸಿರುವ ಅನುಷ್ಠಾನ ಅತ್ಯಂತ ಕಠಿಣವಾಗಿದೆ. ಕಡಣಿ ಗ್ರಾಮದ ವ್ಯಾಪ್ತಿಯ ಹೊಲದಲ್ಲಿರುವ ಖಂಡೋಬಾ ಮಲ್ಲಯ್ಯ ದೇವಸ್ಥಾನದ ಕೋಣೆಯೊಳಗೆ ಪ್ರವೇಶಿಸಿ ಅನುಷ್ಠಾನ ಆರಂಭಿಸಿದ್ದಾರೆ. ಅವರು ಒಳ ಪ್ರವೇಶಿಸಿದ ನಂತರ ದೇವಸ್ಥಾನದ ಬಾಗಿಲು, ಕಿಟಕಿ ಸೇರಿದಂತೆ ಗಾಳಿಯಾಡುವ ಎಲ್ಲಾ ದ್ವಾರಗಳನ್ನು ಇಟ್ಟಿಗೆ ಸಿಮೆಂಟ್ ನಿಂದ ಬಂದ್ ಮಾಡಲಾಗಿದೆ. ಜುಲೈ 19 ರಿಂದಲೇ ಅನುಷ್ಠಾನ ಆರಂಭವಾಗಿದೆ. ಐದು ದಿನಗಳ ನಂತರ ಬಾಗಲಿಗೆ ಅಡ್ಡಲಾಗಿ ಇಟ್ಟಿಗೆಯಿಂದ ಪ್ಯಾಕ್ ಮಾಡಲಾಗಿರುವ ಗೋಡೆ ತೆರವುಗೊಳಿಸಲು ಭಕ್ತರಿಗೆ ಗಣಪತಿ ಮಹಾರಾಜರು ಸೂಚಿಸಿದ್ದಾರೆ.
ನಿತ್ಯವೂ ನಡೆಯುತ್ತಿದೆ ಪೂಜೆ ಪುರಸ್ಕಾರ, ಭಜನೆ
ಗಣಪತಿ ಮಹಾರಾಜರು ಅನುಷ್ಠಾನ ಆರಂಭಿಸಿದ ದಿನದಿಂದ ದಿನಾಲೂ ಮೂರು ಟೈಮ್ ಪೂಜೆ ನಡೆಯುತ್ತಿದೆ. ಭಕ್ತರು ಭಕ್ತಿ ಭಾವದಿಂದ ನಿತ್ಯ ಮೂರು ಕಾಲ ಪೂಜೆ ಸಲ್ಲಿಸುತ್ತಿದ್ದಾರೆ. ಅಲ್ಲದೇ ನಿತ್ಯವೂ ರಾತ್ರಿ ವೇಳೆ ಭಜನೆ, ಡೊಳ್ಳು ನಡೆಯುತ್ತಲೇ ಇದೆ.
ನಾಳೆ ಬಾಗಿಲು ಓಪನ್
ಗಣಪತಿ ಮಹಾರಾಜರ ಸೂಚನೆಯಂತೆ ನಾಳೆ ದಿನಾಂಕ 23-07-26 ರಂದು ಬೆಳಿಗ್ಗೆ ಪೂಜೆ ಮುಗಿದ ನಂತರ ಬಾಗಲಿಗೆ ಅಡ್ಡಲಾಗಿ ಇಟ್ಟಿಗೆಯಿಂದ ನಿರ್ಮಿಸಲಾಗಿರುವ ಕಟ್ಟಡ ತೆರವುಗೊಳಿಸಲಾಗುತ್ತದೆ. ಆ ಕಟ್ಟಡ ತೆರವುಗೊಳಿಸಿ ಒಳೆಗಡೆಯಿರುವ ಗಣಪತಿ ಮಹಾರಾಜರನ್ನು ಸ್ವಾಗತಿಸಲು ಕಡಣಿ ಗ್ರಾಮದ ಭಕ್ತ ಸಮೂಹ ಜಾತಕ ಪಕ್ಷಿಯಂತೆ ಕಾಯ್ದು ಕುಳಿತಿದ್ದಾರೆ.
ಹೊರಗೆ ಬರುತ್ತಿದ್ದಂತೆಯೇ ಜಾತ್ರೆಯ ಸಂಭ್ರಮ
ಐದು ದಿನಗಳ ಕಾಲ ಅನ್ನ ನೀರಿಲ್ಲದೇ, ಗಾಳಿ ಬೆಳಕಿಲ್ಲದೇ ಅತ್ಯಂತ ಕಠಿಣ ಅನುಷ್ಠಾನ ಕೈಗೊಳ್ಳುತ್ತಿರುವುದು ಗಣಪತಿ ಮಹಾರಾಜರ ದೊಡ್ಡ ಪವಾಡ ಎಂದೇ ಭಕ್ತರು ನಂಬಿದ್ದಾರೆ. ಹಾಗಾಗಿ ನಾಳೆ ಗಣಪತಿ ಮಹಾರಾಜರು ಅನುಷ್ಠಾನ ಪೂರ್ಣಗೊಳಿಸಿ ಹೊರ ಬರುತ್ತಿರುವುದನ್ನು ಕಾಣಲು ಜನ ಕುತೂಹಲಭರಿತರಾಗಿದ್ದಾರೆ. ನಾಳೆ ಅನುಷ್ಢಾನ ಮಂಗಲದ ದಿನ ಅಲ್ಲಿ ಜಾತ್ರೆಯ ಸಂಭ್ರಮ ಇರಲಿದೆ. ವಿಶೇಷ ಪೂಜೆ ಪುರಸ್ಕಾರಗಳ ಜೊತೆಗೆ ಡೊಳ್ಳು ಸೇರಿ ವಾದ್ಯಗಳು ಮೇಳೈಸಲಿವೆ. ನಾಳೆ ಇಡೀ ದಿನ ದಾಸೋಹ ಸೇವೆ ಏರ್ಪಡಿಸಲಾಗಿದೆ. ಅನುಷ್ಠಾನ ಮುಗಿಸಿ ಹೊರ ಬರುವ ಗಣಪತಿ ಮಹಾರಾಜರ ಆಶೀರ್ವಾದ ಪಡೆಯಲು, ಅವರ ವಾಣಿ ಕೇಳಲು ಜನ ಕಾತರರಾಗಿದ್ದಾರೆ. ನಾಳೆ ಇದೆಲ್ಲದಕ್ಕೂ ತೆರೆ ಬೀಳಲಿದೆ.
ಅನ್ನ – ನೀರಿಲ್ಲದೇ, ಗಾಳಿ – ಬೆಳಕಿಲ್ಲದೇ ಕಡಣಿಯಲ್ಲಿ ಕಠಿಣ ಅನುಷ್ಠಾನ
By Editor
July 22, 2026 2:14 PM
---Advertisement---






1 thought on “ಅನ್ನ – ನೀರಿಲ್ಲದೇ, ಗಾಳಿ – ಬೆಳಕಿಲ್ಲದೇ ಕಡಣಿಯಲ್ಲಿ ಕಠಿಣ ಅನುಷ್ಠಾನ”