ಕಲಬುರಗಿ : ಬರಗಾಲ ಘೋಷಣೆಗೆ ಆಗ್ರಹಿಸಿ ಕಲಬುರಗಿಯಲ್ಲಿ ಬಿಜೆಪಿ ಪ್ರತಿಭಟನೆ ನಡೆಸುವ ವೇಳೆ ನಡೆಸಿರುವ ದಾಂಧಲೆಯನ್ನು ಸಿಪಿಐಎಂ ಪಕ್ಷದ ಕಲಬುರಗಿ ಜಿಲ್ಲಾ ಕಾರ್ಯದರ್ಶಿ ಕೆ ನೀಲಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಪಕ್ಷದ ನಾಯಕರೇ ಗೂಂಡಾಗಿರಿ ಮತ್ತು ದಾಂಧಲೆ ಮಾಡಿದ್ದು ಹಾಗೂ ಹಿಂಸಾ ಪ್ರಚೋದನಾರಿಯಾಗಿ ನಡೆದುಕೊಂಡಿರುವು ಸರಿಯಲ್ಲ ಎಂದು ಸಿಪಿಏಎಂ ಜಿಲ್ಲಾ ಕಾರ್ಯದರ್ಶಿ ಕೆ ನೀಲಾ ಖಂಡಿಸಿದ್ದಾರೆ.
ಜನತೆಯ ಸಮಸ್ಯೆಗಳನ್ನು ಪರಿಹರಿಸಬೇಕು ಎಂಬುದಕ್ಕಿಂತಲೂ ಕೋಮು ದಂಗೆ ಹಬ್ಬಿಸುವ ದುರು ದ್ದೇಶವೇ ಬಿಜೆಪಿಗಿದೆ. ಪ್ರತಿಭಟನೆ ವೇಳೆಯಲ್ಲಿ ನಾಗರೀಕರೊಂದಿಗೆ ಅನಾಗರೀಕವಾಗಿ ವರ್ತಿಸಿದ್ದಾರೆ ಎಂದು ಬಿಜೆಪಿ ಮುಖಂಡರ ವಿರುದ್ಧ ಕೆ ನೀಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆ ವೇಳೆ ಬಿಜೆಪಿ ಮುಖಂಡರ ಗುಂಡಾ ವರ್ತನೆಗೆ ಕೆ ನೀಲಾ ಆಕ್ರೋಶ
ವಾಹನ ಪ್ರಯಾಣಿಕರ ಹೆಲ್ಮೆಟ್ ತೆಗೆದು ಒಡೆದು ಹಾಕಲಾಗಿದೆ. ಆಟೋ ಚಾಲಕರನ್ನು ನಿಂದಿಸಿ ವಾಹನದ ಕೀ ಕಿತ್ತುಕೊಳ್ಳಲಾಗಿದೆ. ಮತ್ತೊಂದು ವಾಹನದ ಟೈರಿನ ಹವಾ ತೆಗೆಯಲಾಗಿದೆ. ಮಾತ್ರವಲ್ಲ ಜಿಲ್ಲಾಧಿಕಾರಿಯವರಿಗೆ ಮನವಿ ಪತ್ರ ಕೊಡುವಾಗ ಅವರೆಡೆಗೆ ನೀರಿನ ಬಾಟಲ್ ತೂರಲಾಗಿದೆ. ಇದೆಲ್ಲವೂ ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ ಎಂದು ಅವರು ಕಿಡಿಕಾರಿದ್ದಾರೆ.
ಬರ ಪಟ್ಟಿಯಿಂದ ಹೊರಗಿರಲು ಕೇಂದ್ರ ಕಾರಣ
ವಾಸ್ತವವಾಗಿ ಬರ ಪೀಡಿತ ಪಟ್ಟಿಯಿಂದ ಕಲಬುರಗಿ ಹೊರಗೆ ಇರುವುದಕ್ಕೆ ಕೇಂದ್ರ ಸರಕಾರದ ನೀತಿಗಳೇ ಕಾರಣ. ತನ್ನದೇ ಸರಕಾರದ ತಪ್ಪುಗಳನ್ನು ಮುಚ್ಚಿ ಹಾಕಲಾಗಿದೆ. ಮ್ಯಾನ್ಯುಯಲ್ ಡ್ರಾಟ್ 2020 ಯ ನಿಯಮಾವಳಿಗಳು ಬರಪೀಡಿತ ಎಂದು ಘೋಷಿಸಲು ಅಡ್ಡಿಯಾಗಿವೆ ಎಂಬುದು ಬಿಜೆಪಿಗರಿಗೂ ಗೊತ್ತಿದೆ. ಆದರೂ ಜನರನ್ನು ದಿಕ್ತಪ್ಪಿಸಲು ಶಾಂತತೆ ಕದಡಿ ಗಲಭೆ ಹಬ್ಬಿಸುವ ಷಡ್ಯಂತ್ರ ಮಾಡಿದ್ದಾರೆ ಎನ್ನುವುದು ಹಾಲಿ ಶಾಸಕರ ಮತ್ತು ಮಾಜಿ ಶಾಸಕರ ವರ್ತನೆಯು ಸಾಕ್ಷಿಯಾಗಿದೆ.
ಕಾನೂನು ಕ್ರಮಕ್ಕೆ ಆಗ್ರಹ
ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕೆನ್ನುವ ಪ್ರಾಮಾಣಿಕತೆ ಇದ್ದಲ್ಲಿ ತಮ್ಮದೇ ಕೇಂದ್ರ ಸರಕಾರವು ನಿರ್ವಹಿಸಬೇಕಾದ ಕರ್ತವ್ಯದ ಬಗ್ಗೆಯೂ ಮಾತಾಡಲಿ. ಜನರ ಸಂಕಟ ಹಸಿವು ಬಡತನವನ್ನು ಬಂಡವಾಳ ಮಾಡಿಕೊಂಡು ಜನರನ್ನು ಹಿಂಸಾ ಮಾರ್ಗಕ್ಕೆ ಮತ್ತು ಕೋಮುಪ್ರಚೋದನೆಗೆ ಒಳಗಾಗಿಸಿ ದಂಗೆ ಎಬ್ಬಿಸುವ ಪ್ರವೃತ್ತಿಯು ಬಿಜೆಪಿಯದ್ದಾಗಿದೆ. ಗೃಹಮಂತ್ರಿಯ ಜಿಲ್ಲೆಯಲ್ಲಿ ಗಲಭೆ ಹಬ್ಬಿಸಲು ಬರದ ಸಂದರ್ಭ ಬಳಸಿಕೊಳ್ಳುವಂತ ಅಮಾನವೀಯತೆ ಮೆರೆಯಲಾಗಿದೆ. ಪ್ರಜಾಪ್ರಭುತ್ವ ರೀತಿಯಲ್ಲಿ ಹೋರಾಟ ಮಾಡುವುದನ್ನು ಕೈಬಿಟ್ಟು ಹಿಂಸಾಮಾರ್ಗಕ್ಕೆ ಮತ್ತು ನಾಗರೀಕರನ್ನು ಅಪಮಾನಿಸುವ, ಹಿಂಸಿಸುವ ಮತ್ತು ಅವರ ಆಸ್ತಿ-ಪಾಸ್ತಿ ಹಾನಿ ಮಾಡುವುದು ಅಕ್ಷಮ್ಯ ಅಪರಾಧವಾಗಿದೆ. ಬಿಜೆಪಿಯ ಚುನಾಯಿತ ಸದಸ್ಯರೇ ಸ್ವತಃ ಇಂತಹ ಕುಕೃತ್ಯದಲ್ಲಿ ತೊಡಗಿದ್ದನ್ನು ಸಿಪಿಐಎಂ ಪಕ್ಷವು ಖಂಡಿಸುತ್ತದೆ. ಶಾಂತಿ ಸೌಹಾರ್ದತೆ ಮತ್ತು ಪ್ರಜಾಪ್ರಭುತ್ವ ರಕ್ಷಿಸಬೇಕಾದವರೇ ಗೂಂಡಾಗಳಂತೆ ನಡೆದುಕೊಂಡಿವುದು ಖಂಡನೀಯವಾಗಿದೆ. ಸರಕಾರವೂ ಕೂಡಲೆ ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಕೆ ನೀಲಾ ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿದ್ದಾರೆ.







